ಸುಳ್ಯ, ಸೆ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ–2 ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ–2ರ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮದ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ‘ಗಾಂಧಿ ಸಂಸ್ಕೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ’ ಅಕ್ಟೋಬರ್ 5ರಂದು ಸುಳ್ಯದ ಬೂಡು–ಕೇರ್ಪಳದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ನಡೆಯಲಿದೆ.
ಸಮಾವೇಶದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸುಳ್ಯದ ಶ್ರೀ ಚೆನ್ನಕೇಶವ ದೇವಳದಲ್ಲಿ ನಡೆಯಿತು. ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಎನ್.ಎ. ರಾಮಚಂದ್ರ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ದುಶ್ಚಟಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು, ಆರೋಗ್ಯಕರ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಕುರಿತು ಅರಿವು ಮೂಡಿಸುವುದು ಮತ್ತು ಗಾಂಧೀಜಿಯವರ ಆದರ್ಶಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ತಾಲೂಕು ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಯೋಜನಾಧಿಕಾರಿ ಮಾಧವ ಗೌಡ, ಮೇಲ್ವಿಚಾರಕ ದಿನೇಶ್ ಡಿ., ಭಜನಾ ಪರಿಷತ್ ಸುಳ್ಯ ವಲಯ ಅಧ್ಯಕ್ಷೆ ಸವಿತಾ ಸಂದೇಶ್, ಒಕ್ಕೂಟ ಅಧ್ಯಕ್ಷ ಹರಿಪ್ರಸಾದ್, ಸುಬ್ಬ ಪಾಟಾಳಿ, ಮಲ್ಲೇಶ್ ಬೆಟ್ಟಂಪಾಡಿ, ವಿಜಯಕುಮಾರ್ ಉಬರಡ್ಕ, ಪದ್ಮನಾಭ ಶೆಟ್ಟಿ, ಭಾಸ್ಕರ ಅಡ್ಕಾರ್, ಮನೋಹರ್ ಹಾಗೂ ಕೃಪಾಶಂಕರ ತುದಿಯಡ್ಕ ಉಪಸ್ಥಿತರಿದ್ದರು.
ಅ.5 ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ; ಚೆನ್ನಕೇಶವ ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

























