ಸೆ.28ರಿಂದ ಬ್ಯಾಂಕ್ ನೌಕರರ ಮೂರು ದಿನ ಮುಷ್ಕರ,ಐದು ದಿನಗಳ ಕಾಲ ಶಾಖಾ ಸೇವೆಗಳಿಗೆ ವ್ಯತ್ಯಯ ಸಾಧ್ಯತೆ

ನವದೆಹಲಿ, ಸೆ.25: ಬ್ಯಾಂಕ್ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಸರಣಿ ರಜೆ ಹಾಗೂ ಮುಷ್ಕರದ ಹಿನ್ನೆಲೆಯಲ್ಲಿ ಶಾಖಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರು ಮೂರು ದಿನಗಳ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಬ್ಯಾಂಕ್ ಉದ್ಯೋಗಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ. ಪ್ರಮುಖವಾಗಿ ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಇರಬೇಕು ಹಾಗೂ ಎಲ್ಲ ಶನಿವಾರಗಳನ್ನೂ ರಜಾದಿನವನ್ನಾಗಿ ಮಾಡಬೇಕು ಎಂಬ ಬೇಡಿಕೆ ಮುನ್ನಲೆಯಲ್ಲಿದೆ.
ಮುಷ್ಕರಕ್ಕೂ ಮುನ್ನ ಸೆ.26ರಂದು ಶನಿವಾರ ಹಾಗೂ ಸೆ.27ರಂದು ಭಾನುವಾರ ಇರುವುದರಿಂದ ಕೆಲವು ಬ್ಯಾಂಕ್ ಶಾಖೆಗಳಲ್ಲಿ ಸೇವೆ ಇರುವುದಿಲ್ಲ. ಇದರ ಬೆನ್ನಲ್ಲೇ ಸೆ.28, 29 ಮತ್ತು 30ರಂದು ಮುಷ್ಕರ ನಡೆಯಲಿರುವುದರಿಂದ ಸತತ ಹಲವು ದಿನಗಳ ಕಾಲ ಬ್ಯಾಂಕ್ ಶಾಖೆಗಳ ನೇರ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.
ಮುಷ್ಕರದ ಅವಧಿಯಲ್ಲಿ ಹಣ ಠೇವಣಿ, ಹಣ ಪಡೆಯುವುದು, ಚೆಕ್ ಸೇರಿದಂತೆ ಕೌಂಟರ್ ಮೂಲಕ ನಡೆಯುವ ಹಲವು ಸೇವೆಗಳು ಪರಿಣಾಮಕ್ಕೆ ಒಳಗಾಗಬಹುದು. ಬ್ಯಾಂಕ್‌ಗಳು ಮುಷ್ಕರದ ದಿನಗಳಲ್ಲಿ ತಮ್ಮ ಸಿಬ್ಬಂದಿ ಹಾಗೂ ಶಾಖಾ ಕಾರ್ಯಾಚರಣೆ ಕುರಿತು ಪ್ರತ್ಯೇಕ ಸೂಚನೆ ನೀಡುವ ಸಾಧ್ಯತೆಯೂ ಇದೆ.
ಆದರೆ ಯುಪಿಐ, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರುವ ನಿರೀಕ್ಷೆಯಿದೆ. ಆದರೂ ತಾಂತ್ರಿಕ ಕಾರಣಗಳಿಂದ ಕೆಲ ಸಂದರ್ಭಗಳಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಬ್ಯಾಂಕ್ ಶಾಖೆಗೆ ತೆರಳಿ ಮಾತ್ರ ಮಾಡಬೇಕಾದ ತುರ್ತು ವ್ಯವಹಾರಗಳು, ಹಣದ ಅವಶ್ಯಕತೆ ಅಥವಾ ಚೆಕ್‌ ಸಂಬಂಧಿತ ಕೆಲಸಗಳಿದ್ದರೆ ಮುಷ್ಕರ ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ಸರಣಿ ರಜೆ ಮತ್ತು ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಯೋಜಿಸಿಕೊಂಡರೆ ಕೊನೆಯ ಕ್ಷಣದ ಅನಾನುಕೂಲತೆಯನ್ನು ತಪ್ಪಿಸಬಹುದು.











































Leave a Comment

Your email address will not be published. Required fields are marked *

error: Content is protected !!
Scroll to Top