ಸುಳ್ಯ: ಇನ್ನೂ ಬಾಲ್ಯದ ಹೊಸ್ತಿಲಲ್ಲೇ ಬದುಕಿನ ಕನಸುಗಳನ್ನು ಕಾಣಬೇಕಿದ್ದ 13ರ ಹರೆಯದ ಮೋಕ್ಷಿತ್ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಮರ ಪಡೂರು ಗ್ರಾಮದ ಚೊಕ್ಕಾಡಿ ಕಜೆಮೂಲೆಯ ಕುಶಾಲಪ್ಪ ನಾಯ್ಕ ಮತ್ತು ಗೀತಾಕುಮಾರಿ ದಂಪತಿಯ ಪುತ್ರ ಮೋಕ್ಷಿತ್ ಅ.3ರಂದು ನಿಧನರಾಗಿದ್ದಾರೆ.
ಅಜ್ಜನಗದ್ದೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಮೋಕ್ಷಿತ್ ಕಳೆದ ಒಂದು ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದನು. ಆಗಾಗ ರಕ್ತ ವಾಂತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಮಗನ ಆರೋಗ್ಯ ಸುಧಾರಿಸಬಹುದು ಎಂಬ ಆಶಯದೊಂದಿಗೆ ಮಂಗಳೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.
ಆದರೆ, ಮಗನನ್ನು ಗುಣಪಡಿಸಿ ಮತ್ತೆ ಸಹಜ ಜೀವನಕ್ಕೆ ಮರಳಿಸಬೇಕೆಂಬ ಪೋಷಕರ ನಿರೀಕ್ಷೆ ಈಡೇರಲಿಲ್ಲ. ಅ.3ರಂದು ಮೋಕ್ಷಿತ್ನ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಾಗ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಕಣ್ಣೆದುರೇ ಬೆಳೆದು ದೊಡ್ಡವನಾಗಬೇಕಿದ್ದ ಮಗನನ್ನು ಕಳೆದುಕೊಂಡ ಪೋಷಕರ ನೋವು ಹೇಳತೀರದಾಗಿದೆ. ಸಹೋದರ ಜಿತೇಶ್ನನ್ನು ಅಗಲಿರುವ ಮೋಕ್ಷಿತ್ನ ಅಕಾಲಿಕ ನಿಧನ ಕುಟುಂಬದವರಲ್ಲಿ ದುಃಖದ ಛಾಯೆ ಮೂಡಿಸಿದೆ. ಬಾಲಕನ ನಿಧನಕ್ಕೆ ಸ್ಥಳೀಯರು ಹಾಗೂ ಪರಿಚಿತರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣಿಸಿದ ಮೋಕ್ಷಿತ್; ಕುಟುಂಬದಲ್ಲಿ ಮಡುಗಟ್ಟಿದ ದುಃಖ











