ಕೋಳಿ ಸಾಕಣೆದಾರರ ಸಮಸ್ಯೆ ಬಗೆಹರಿಸಲು ಯು.ಟಿ. ಖಾದರ್ ಅವರಿಗೆ ಮನವಿ

ಸುಳ್ಯ: ಕೋಳಿ ಸಾಕಣೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೋಳಿ ಸಾಕಣೆದಾರರ ಹಿತರಕ್ಷಣಾ ಸಮಿತಿ ದಕ್ಷಿಣ ಕನ್ನಡ ಸಂಚಾಲಕ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.















ಕೋಳಿ ಸಾಕಣೆದಾರರು ಕಟ್ಟಡ, ಉಪಕರಣಗಳು ಸೇರಿದಂತೆ ಮೂಲಸೌಕರ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 1961ರ ಭೂ ಸುಧಾರಣಾ ಕಾಯ್ದೆಯಲ್ಲಿ ಕೋಳಿ ಸಾಕಣೆಯನ್ನು ಕೃಷಿ ಚಟುವಟಿಕೆಯಾಗಿ ಪರಿಗಣಿಸಲಾಗಿದ್ದರೂ, ಕೃಷಿಗೆ ದೊರೆಯುವ ಹಲವು ಸೌಲಭ್ಯಗಳು ಕೋಳಿ ಸಾಕಣೆದಾರರಿಗೆ ದೊರೆಯುತ್ತಿಲ್ಲ ಎಂದು ಸಚಿವರ ಗಮನಕ್ಕೆ ತರಲಾಯಿತು.

ಗ್ರಾಮ ಪಂಚಾಯಿತಿಗಳಿಂದ ಲೈಸೆನ್ಸ್ ಹಾಗೂ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಭೂ ಪರಿವರ್ತನೆ ಕೇಳಲಾಗುತ್ತಿರುವುದು, ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲದಿದ್ದರೂ ಅನಗತ್ಯ ತೊಂದರೆ ಎದುರಾಗುತ್ತಿರುವುದು, ಕೋಳಿ ಸಾಕಣೆಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸುವುದು, ಕಂಪನಿಗಳು ಕೋಳಿಗೆ ಸೂಕ್ತ ದರ ನಿಗದಿಪಡಿಸುವುದು, ಬ್ಯಾಂಕ್‌ಗಳಿಂದ ಕೋಳಿ ಸಾಕಣೆಗೆ ಸಾಲ ಸೌಲಭ್ಯ ಕಲ್ಪಿಸುವುದು ಹಾಗೂ ಸಹಕಾರಿ ಸಂಘಗಳ ಮೂಲಕ ಸಾಲ ನೀಡುವ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದಿಡಲಾಯಿತು.

ಮನವಿಯನ್ನು ಆಲಿಸಿದ ಸಚಿವ ಯು.ಟಿ. ಖಾದರ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂಪನಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕೋಳಿ ಸಾಕಣೆದಾರರ ಸಭೆ ಶೀಘ್ರ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದ್ದಾರೆ ಎಂದು ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.

“ಕೋಳಿ ಸಾಕಣೆದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಿಸಿರುವ ಹೋರಾಟದಲ್ಲಿ ಇದು ನಮ್ಮ ಮೊದಲ ಜಯವಾಗಿದೆ. ಮುಂದಿನ ದಿನಗಳಲ್ಲಿ ಸಂಘಟಿತವಾಗಿ ಹೋರಾಟ ಮುಂದುವರಿಸಲಾಗುವುದು” ಎಂದು ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top