ಸಂಪಾಜೆ : ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ಒತ್ತು
ಸಂಪಾಜೆ: ಗೇರು ಸಂಶೋಧನಾ ನಿರ್ದೇಶನಾಲಯ (ICAR–DCR), ಪುತ್ತೂರು ವತಿಯಿಂದ ಖೇತ್ ಬಚಾವೋ ಅಭಿಯಾನದ ಅಂಗವಾಗಿ ಸಂಪಾಜೆ ಗ್ರಾಮದಲ್ಲಿ ಇಂದು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ. ವೀಣಾ, ಹಿರಿಯ ವಿಜ್ಞಾನಿ ತೋಟಗಾರಿಕೆ ಮತ್ತು ಡಾ. ಭಾಗ್ಯ ಹಿರಿಯ ವಿಜ್ಞಾನಿ ತೋಟಗಾರಿಕೆ ಇವರು ಗ್ರಾಮದ ಕೃಷಿಕರ ಗೇರು ತೋಟಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಂಪಾಜೆ ಗ್ರಾಮದ ಕೃಷಿಕ ಜಗದೀಶ್ ಕೆ.ಪಿ. ಅವರ ಗೇರು ತೋಟಕ್ಕೆ ಹಾಗೂ ಸಿಲ್ವೆಸ್ಟರ್ ಡಿಸೋಜಾ ಅವರು ನಿರ್ವಹಿಸುತ್ತಿರುವ ಗೇರು ತೋಟಗಳಿಗೆ ಭೇಟಿ ನೀಡಲಾಯಿತು. ಗೇರು ಕೃಷಿಯ ನಿರ್ವಹಣೆ, ಮಣ್ಣಿನ ಆರೋಗ್ಯದ ಮಹತ್ವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಚರ್ಚಿಸಲಾಯಿತು.
ಖೇತ್ ಬಚಾವೋ ಅಭಿಯಾನದ ಆಶಯದಂತೆ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಕೃಷಿಕರಾದ ಹನೀಫ್ ಎಸ್.ಕೆ., ಸುಂದರಿ ಮುಂಡಡ್ಕ, ನಾಗೇಶ್ ಬಾಚಿಗದ್ದೆ ಸೇರಿದಂತೆ ಗ್ರಾಮದ ಇತರ ಕೃಷಿಕರು ಭಾಗವಹಿಸಿದ್ದರು.
ಸಂಪಾಜೆ ಗ್ರಾಮದಲ್ಲಿ ಕೃಷಿ ಸಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿನಿ ವಿಶ್ವನಾಥ್ (ನಿಶಾ) ಅವರು ಈ ಕಾರ್ಯಕ್ರಮದಲ್ಲಿ ಕೃಷಿಕರಾಗಿ ಪಾಲ್ಗೊಂಡರು.
ವಿಜ್ಞಾನಿಗಳ ನೇರ ಭೇಟಿ ಹಾಗೂ ಮಾರ್ಗದರ್ಶನವು ಸ್ಥಳೀಯ ಕೃಷಿಕರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಹೆಚ್ಚಿನ ಅರಿವು ಪಡೆಯಲು ಸಹಕಾರಿಯಾಯಿತು.
ಸಂಪಾಜೆಯಲ್ಲಿ ಖೇತ್ ಬಚಾವೋ ಅಭಿಯಾನ: ಗೇರು ಕೃಷಿ ತೋಟಗಳಿಗೆ ವಿಜ್ಞಾನಿಗಳ ಭೇಟಿ














