ಅರಂತೋಡು : ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಉಳುವಾರು ಮೂಲದ ಯುವತಿಯೊಬ್ಬರು 32ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಅರ್ಹತೆ ಗಳಿಸಿರುವ ಈಕೆ ಪ್ರಸ್ತುತ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಉಳುವಾರು ಸೀತಾರಾಮ ಗೌಡ ಮತ್ತು ರೇವತಿ ದಂಪತಿಯ ಪುತ್ರಿಯಾಗಿರುವ ಈಕೆಯ ಸಾಧನೆ ಕುಟುಂಬದವರು, ಬಂಧುಗಳು ಹಾಗೂ ಊರಿನವರಲ್ಲಿ ಸಂತಸ ಮೂಡಿಸಿದೆ. ಉನ್ನತ ಶಿಕ್ಷಣದ ಹಾದಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವ ಈಕೆಯನ್ನು ಹಲವಾರು ಮಂದಿ ಅಭಿನಂದಿಸಿದ್ದಾರೆ.








































