ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸುತ್ತ ಪೊದೆಗಳ ಆವರಣ: ವಿಷಜಂತುಗಳ ಭೀತಿಯಲ್ಲಿ ಪ್ರಯಾಣಿಕರು !

ಸುಳ್ಯ: ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸುತ್ತಮುತ್ತ ಗಿಡಗಂಟಿಗಳು ಹಾಗೂ ಕಾಡುಬಳ್ಳಿಗಳು ಬೆಳೆದು ನಿಂತಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.









































































ಸುಳ್ಯ ನಗರವು ಪ್ರಮುಖ ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿರುವ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಮತ್ತು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆದರೆ ಬಸ್ ನಿಲ್ದಾಣದ ಆವರಣದ ಸುತ್ತಲೂ ಪೊದೆಗಳು ದಟ್ಟವಾಗಿ ಬೆಳೆದು, ಕಾಡುಬಳ್ಳಿಗಳು ಎತ್ತರಕ್ಕೆ ಹರಡಿಕೊಂಡಿವೆ. ಇದರಿಂದ ಬಸ್ ನಿಲ್ದಾಣದ ಪರಿಸರ ಅಸ್ವಚ್ಛವಾಗಿ ಕಾಣಿಸುವುದರ ಜತೆಗೆ ಪ್ರಯಾಣಿಕರಲ್ಲಿ ಆತಂಕವೂ ಮೂಡಿದೆ.

ವಿಷಜಂತುಗಳ ಆಶ್ರಯವಾಗುವ ಆತಂಕ

ದಟ್ಟವಾಗಿ ಬೆಳೆದಿರುವ ಪೊದೆಗಳ ಒಳಭಾಗದಲ್ಲಿ ಹಾವು ಸೇರಿದಂತೆ ವಿಷಜಂತುಗಳು ಆಶ್ರಯ ಪಡೆಯುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಸುಳ್ಯ ನಗರದ ಚೆನ್ನಕೇಶವ ದೇವಸ್ಥಾನದ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅದನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಬಸ್ ನಿಲ್ದಾಣದ ಸುತ್ತಮುತ್ತಲಿನ ಪೊದೆಗಳ ವಿಚಾರ ಮತ್ತೆ ವಿಷಜಂತುಗಳ ಭೀತಿಯನ್ನು ಹೆಚ್ಚಿಸಿದೆ.

ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಬಸ್ ನಿಲ್ದಾಣದ ಸುತ್ತಮುತ್ತ ಇಷ್ಟೊಂದು ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೆ.ಎಸ್.ಆರ್.ಟಿ.ಸಿ. ಆಡಳಿತದ ಜವಾಬ್ದಾರಿಯಾಗಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಬಸ್ ನಿಲ್ದಾಣದ ಸುತ್ತಮುತ್ತ ಬೆಳೆದಿರುವ ಪೊದೆ ಹಾಗೂ ಕಾಡುಬಳ್ಳಿಗಳನ್ನು ತೆರವುಗೊಳಿಸಿ, ಆವರಣದ ಸ್ವಚ್ಛತೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಸತ್ಯಲತಾ ಅವರನ್ನು ಸಂಪರ್ಕಿಸಿದ್ದಾಗ ನಮ್ಮ ಇಂಜಿನಿಯರ್ ಅವರಿಗೆ ತಿಳಿಸಲಾಗಿದೆ.ಕಾಡು ಪೊದೆಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top