2026ರ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನೇರವಾಗಿ ಗುಂಡಿಗೆ ಹಾಕಿದ ಕ್ರಿಮಿನಲ್ ಕೃತ್ಯವಾಗಿದೆ. ಈ ಭಾರೀ ದಂಧೆಗೆ ಸರ್ಕಾರ ಮತ್ತು ಪರೀಕ್ಷಾ ವ್ಯವಸ್ಥೆ ನಡೆಸಿದ ನಿರ್ಲಕ್ಷ್ಯವಾಗಿದೆ. ನೀಟ್ ಪರೀಕ್ಷೆಯ ಹೊಣೆಗಾರರಾದ ಸಚಿವ ಧರ್ಮೆಂದ್ರ ಸಿಂಗ್ ಪ್ರದಾನ್ ತಕ್ಷಣ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಘಟಕ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಅಧ್ಯಕ್ಷ ವೇಣು ಗೋಪಾಲ ಒತ್ತಾಯಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವರ್ಷಪೂರ್ತಿ ಚಡಪಡಿಸಿ ಓದಿ, ಕುಟುಂಬದ ಆರ್ಥಿಕ ಸಂಕಷ್ಟವನ್ನು ಎದುರಿಸಿ, ಕೋಚಿಂಗ್ ಗಳಿಗೆ ಸಾಲ ಮಾಡಿ ಸೇರಿ, ದಿನದ 12-14 ಗಂಟೆಗಳು ಓದಿದ ವಿದ್ಯಾರ್ಥಿಗಳ ಪರಿಶ್ರಮವನ್ನು ಒಂದಷ್ಟು ಹಣದ ದಾಹಿಗಳಿಗಾಗಿ, ಪ್ರಶ್ನೆಪತ್ರಿಕೆ ಮಾಫಿಯಾದಿಗಾಗಿ ಹರಾಜು ಹಾಕಿರುವುದನ್ನು ನಮ್ಮ ಪಕ್ಷ ಕೇವಲ “ತಪ್ಪು” ಎಂದು ಅಲ್ಲ, “ಶಿಕ್ಷಣ ದ್ರೋಹ “ಎಂದು ಪರಿಗಣಿಸುತ್ತದೆ. ಇಂತಹ ವ್ಯವಸ್ಥೆಯನ್ನು ಕಾಪಾಡಿ ಕುಳಿತಿರುವ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅತ್ಯಂತ ದೊಡ್ಡ ದ್ರೋಹ ಮಾಡಿದೆ.
ತಪ್ಪಿಸ್ಥರಿಗೆ ಶಿಕ್ಷ ಕಠಿಣ ಶಿಕ್ಷೆಯಾಗಬೇಕು.ಆತ್ಮ ಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ಕೊಡಬೇಕೆಂದು ಅವರು ಒತ್ತಾಯಿಸಿದರು.
ಈ ಘಟನೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಹಿಂಸೆ, ಆತ್ಮಹತ್ಯೆ ಯೋಚನೆ, ಕುಟುಂಬದ ಆರ್ಥಿಕ ಹಾಳು ಇವುಗಳಿಗೆ ಕಾರಣವಾದ ಸರ್ಕಾರದ ನಿರ್ಲಕ್ಷ್ಯವನ್ನು ಕಾನೂನುಮಟ್ಟದಲ್ಲಿ ಪ್ರಶ್ನಿಸಲು ದೇಶದಾದ್ಯಂತ ವಿದ್ಯಾರ್ಥಿಗಳ ಪರ ಜನಾಂದೋಲನಕ್ಕೂ ನಮ್ಮ ಪಕ್ಷ ಮುನ್ನುಗ್ಗಲು ಸಿದ್ದವಿದೆ.
ಸರ್ಕಾರದ ಶಿಕ್ಷಣ ನೀತಿಯನ್ನು ನಾವು ಸಂಪೂರ್ಣವಾಗಿ ಅನೈತಿಕ, ಜನ ವಿರೋಧಿ, ವಿದ್ಯಾರ್ಥಿ ವಿರೋಧಿ ಎಂದು ಘೋಷಿಸುತ್ತೇವೆ.
ಭವಿಷ್ಯದಲ್ಲಿ ಇಂತಹ ಅವ್ಯವಸ್ಥೆ ಮರುಕಳಿಸಿದರೆ, ಪ್ರಶ್ನೆಪತ್ರಿಕೆ ಮಾಫಿಯಾ ಮತ್ತು ಅವರ ರಾಜಕೀಯ ಆಶ್ರಯದವರನ್ನು ನೇರವಾಗಿ ಜನರ ನ್ಯಾಯ ಮಂಡಳಿಗೆ ಕೆದಕಿಕೊಡುವುದಾಗಿ ನಮ್ಮ ಪಕ್ಷ ಸಾರ್ವಜನಿಕವಾಗಿ ಎಚ್ಚರಿಸುತ್ತದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಭ್ರಷ್ಟಾಚಾರ-ಮುಕ್ತ, ಪ್ರಾಮಾಣಿಕ, ಜನಪರ ಆಡಳಿತಕ್ಕೆ ಬದ್ಧವಾಗಿರುವ ಪಕ್ಷವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಸೀಟು ಮಾರಾಟ, ಲಂಚಕ್ಕೆ ಸಿಗುವ ಅಂಕಗಳು ಇವೆಲ್ಲವೂ ವಿದ್ಯಾರ್ಥಿಗಳ ಕನಸುಗಳನ್ನು, ಕುಟುಂಬದ ಭವಿಷ್ಯವನ್ನು ಕೆಣಕುವ ಶಿಕ್ಷಣ ಮಾಫಿಯಾ ವ್ಯವಸ್ಥೆಯ ಭಾಗ. ಈ ವ್ಯವಸ್ಥೆಯನ್ನು ಕಾಪಾಡಿ ಕುಳಿತಿರುವ ಯಾವ ಸರ್ಕಾರಕ್ಕೂ ನಮ್ಮ ಪಕ್ಷ ರಾಜಕೀಯವಾಗಿ, ಸಾರ್ವಜನಿಕವಾಗಿ, ಜನಾಂದೋಲನದ ಮೂಲಕ ಸವಾಲು ಹಾಕುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಜಾಗೃತ ನಾಗರಿಕರಿಗೆ ಸ್ಪಷ್ಟವಾಗಿ ಹೇಳುವದೇನಂದರೆ : ಈ ಬಾರಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಯನ್ನು ಮೌನವಾಗಿ ಸಹಿಸಿ ಕುಳಿತರೆ, ನಾಳೆ ನಿಮ್ಮ ಮಕ್ಕಳ ಮತ್ತೊಂದು ಕನಸನ್ನು ಮಾರಾಟ ಮಾಡಲಾಗುತ್ತದೆ. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟು ಮಾಡುವುದು ಬೇಡ, ಆದರೆ ತೀವ್ರ, ಸಂಘಟಿತ, ನಿರಂತರ ಜನತಾಂತ್ರಿಕ ಪ್ರತಿಭಟನೆಗಳ ಮೂಲಕ ಸರ್ಕಾರದ ಕಿವಿಗೆ ಹೊಡೆದಾಗಷ್ಟೇ ಬದಲಾವಣೆ ಸಾಧ್ಯ. ಅದಕ್ಕಾಗಿ ನಮ್ಮ ಪಕ್ಷ ನಿಮ್ಮೊಂದಿಗೆ ಬೀದಿಗಿಳಿದು ಹೋರಾಟ ನಡೆಸಲು ಸಂಪೂರ್ಣ ಸಿದ್ಧವಾಗಿದೆ.
ಸರ್ಕಾರವು ತಕ್ಷಣ ಗಂಭೀರ, ಕಠಿಣ ಕ್ರಮಗಳನ್ನು ಕೈಕೊಳ್ಳದಿದ್ದರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ : ದಕ್ಷಿಣ ಕನ್ನಡ ಜಿಲ್ಲಾ ಘಟಕವು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಕೈಜೋಡಿಸಿ, ನಿರಂತರ ಪ್ರತಿಭಟನೆ, ಧರಣಿ, ಬಹಿರಂಗ ಸಭೆಗಳು, ಮೆರವಣಿಗೆಗಳ ಮೂಲಕ ಈ ಶಿಕ್ಷಣ ದ್ರೋಹದ ವಿರುದ್ಧ ಉಗ್ರ ಹೋರಾಟ ನಡೆಸುತ್ತದೆ.
ಈ ಹೋರಾಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ, ಶಿಕ್ಷಣ ನೀತಿ, ಮತ್ತು ಜನರ ವಿಶ್ವಾಸವನ್ನು ಮರಳಿ ಪಡೆಯುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಕ್ರಷ್ಣೆ ಗೌಡ, ದಿನೇಶ,ವಿನ್ನಿ ಪಿಂಟೋ,ಶಶಿಧರ್,ನವೀನ್ ಪೇರಾವ,ಶಿವರಾಜ್,ಸಜಿ,ಪ್ರಭಾಕರ,ಸುನೀತ,ಸಿಜು ಇತರರು ಉಪಸ್ಥಿತರಿದ್ದರು.





































































