ಸಂಪಾಜೆ, ಸೆ.23: ಕಸ್ತೂರಿರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರದೇಶಗಳು ಹಾಗೂ ಅದರ ಪರಿಣಾಮಗಳ ಕುರಿತು ಗ್ರಾಮಸ್ಥರಿಂದ ಆಕ್ಷೇಪಣೆ, ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯುವ ಉದ್ದೇಶದಿಂದ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಸ್.ಎಲ್. ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿ ಸಿಬ್ಬಂದಿಯನ್ನು ಕಳುಹಿಸಿದ್ದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮಸ್ಥರ ಪರವಾಗಿ ಮಾತನಾಡಿದ ತಿರುಮಲ ಸೋನ, ಕಸ್ತೂರಿರಂಗನ್ ವರದಿಗೆ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸುವಂತೆ ಕರೆ ನೀಡಿದರು. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಆಕ್ಷೇಪಣೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ಕುರಿತು ಸಲಹೆ ನೀಡಿದರು.
ಗ್ರಾಮಸ್ಥರು, “ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ನಮ್ಮ ಗ್ರಾಮದಲ್ಲಿ ಯಾವುದೇ ಗಣಿಗಾರಿಕೆ, ಕ್ವಾರಿ ಅಥವಾ ದೊಡ್ಡ ಕೈಗಾರಿಕೆಗಳಿಲ್ಲ. ಉಪಗ್ರಹ ಚಿತ್ರಗಳ ಆಧಾರದ ಮೇಲೆ ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿರುವುದು ವೈಜ್ಞಾನಿಕವಲ್ಲ. ಕೇರಳ ಮಾದರಿಯಲ್ಲಿ ಭೌತಿಕ ಸರ್ವೇ ನಡೆಸಬೇಕು” ಎಂದು ಒತ್ತಾಯಿಸಿದರು.
ಇ.ಎಸ್.ಎ ವ್ಯಾಪ್ತಿಯಿಂದ ಮನೆ ನಿರ್ಮಾಣ, ರಸ್ತೆ, ಶಾಲೆ, ಆಸ್ಪತ್ರೆ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಗ್ರಾಮೀಣ ಅಭಿವೃದ್ಧಿಗೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು, ಜನವಸತಿ ಪ್ರದೇಶ, ಕೃಷಿ ಭೂಮಿ ಹಾಗೂ ಗ್ರಾಮೀಣ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಸರ್ವಾನುಮತದಿಂದ ಸಹಿ ಮಾಡಿ ಆಕ್ಷೇಪಣೆ ಸಲ್ಲಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರ ಪರವಾಗಿ ಸಲಹೆ ನೀಡಿದ ತಿರುಮಲ ಸೋನ ಅವರನ್ನು ಅಧಿಕಾರಿಗಳು ಅಭಿನಂದಿಸಿದರು.
ಕಸ್ತೂರಿರಂಗನ್ ವರದಿಯಿಂದ ಸಂಪಾಜೆ ಗ್ರಾಮವನ್ನು ಸಂಪೂರ್ಣ ಕೈಬಿಡಲು ಮನವಿ

























