ಪಂಚಾಯತ್ ಚುನಾವಣೆ ಸಿದ್ಧತೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ

ಅರಂತೋಡು, ಅ.5: ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿಗಳ ಸಭೆಯು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದಲೇ ಬಲಪಡಿಸುವ ಅಗತ್ಯವಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಕಾರ್ಯಕರ್ತರೂ ಸಕ್ರಿಯವಾಗಿ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಬ್ಲಾಕ್ ಕಾಂಗ್ರೆಸ್ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಮಾತನಾಡಿ, ಎಲ್ಲರೂ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಅನುಕೂಲವಾಗುತ್ತದೆ. ಅರಂತೋಡು ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲು ಪ್ರಯತ್ನಿಸಲಾಗಿದ್ದು, ಮುಂದೆಯೂ ಪಕ್ಷವನ್ನು ಬಲಪಡಿಸಿ ಗೆಲುವಿಗೆ ಸಹಕರಿಸಿದರೆ ಮತ್ತಷ್ಟು ಅಭಿವೃದ್ಧಿ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಅವರು ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಪಕ್ಷದ ಮುಂದಿನ ಕಾರ್ಯಕ್ರಮವಾದ ‘ಸಂಘಟನ್ ಸೃಜನ್ ಅಭಿಯಾನ’ದ ಕುರಿತು ವಿವರಿಸಿ, ಮುಂಬರುವ ಪಂಚಾಯತ್ ಚುನಾವಣೆಗೆ ಈಗಿನಿಂದಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಹಿರಿಯರಾದ ತೀರ್ಥರಾಮ ಪರ್ನೋಜಿ, ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ರೈ ಹಾಗೂ ತೊಡಿಕಾನ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ತಿಮ್ಮಯ್ಯ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿಕೋಡಿ, ದೇವಪ್ಪ ಕುಂದಲ್ಪಾಡಿ, ತೇಜ ಬನ, ಬಾಬು ಜುಬೇರ್, ಗಾಂಧಿ ಅಡ್ಯಡ್ಕ, ಜನಾರ್ದನ, ಸುಂದರ, ಕರುಣಾಕರ ಇರ್ನೆ, ಬಾಬು ಮಾಡದಕಾನ, ತಾಜುದ್ದೀನ್ ಅರಂತೋಡು, ಶಶಿ, ರಾಧಾಕೃಷ್ಣ, ಆಶಿಕ್, ಹರ್ಷಿತ್, ರಾಘವ, ಗಣಪತಿ ಸೇರಿದಂತೆ ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.















Leave a Comment

Your email address will not be published. Required fields are marked *

error: Content is protected !!
Scroll to Top