ಸುಳ್ಯ, ಅ.8: ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಮಟ್ಟದ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವೆಂಕಪ್ಪಗೌಡ, ಕಸ್ತೂರಿ ರಂಗನ್ ವರದಿ ವಿರುದ್ಧ ಈಗಾಗಲೇ ಹಲವು ಹೋರಾಟಗಳು ನಡೆದಿದ್ದು, ಮಲೆನಾಡಿನ ಜನರ ಹಕ್ಕು ಮತ್ತು ಕೃಷಿ ಬದುಕಿನ ರಕ್ಷಣೆಗೆ ಹೋರಾಟ ಮುಂದುವರಿಯಬೇಕಾಗಿದೆ ಎಂದರು. ಈ ವಿಚಾರದಲ್ಲಿ ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಪರಿಣಾಮಕಾರಿಯಾಗಿ ಧ್ವನಿ ಎತ್ತಬೇಕಿದ್ದು, ಮಲೆನಾಡು ಜನಹಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮುಂದಿನ ದಿನಗಳಲ್ಲಿಯೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ನಿರ್ದೇಶಕ ಎಸ್.ಎನ್. ಮನ್ಮಥ ಮಾತನಾಡಿ, ಮಲೆನಾಡಿನ ರೈತರ ಸಮಸ್ಯೆಗಳು ಎದುರಾದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಸಮಸ್ಯೆ ತಮ್ಮ ಕಾಲ ಬುಡಕ್ಕೆ ಬಂದಾಗ ಮಾತ್ರ ಧ್ವನಿ ಎತ್ತುವ ಮನೋಭಾವ ಬದಲಾಗಬೇಕು. ರೈತರ ಹಿತಕ್ಕಾಗಿ ಮುಂದಿನ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಮಲೆನಾಡಿನ ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದರು. ವರದಿಯನ್ನು ರೂಪಿಸುವ ಸಂದರ್ಭದಲ್ಲಿ ಸ್ಥಳೀಯ ಪರಿಸ್ಥಿತಿ ಹಾಗೂ ಮಲೆನಾಡಿನ ಜನರ ಬದುಕಿನ ವಾಸ್ತವಾಂಶಗಳನ್ನು ಸಮರ್ಪಕವಾಗಿ ಪರಿಗಣಿಸಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಇದು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಪರಿಹರಿಸಬಹುದಾದ ವಿಚಾರವಲ್ಲ; ರಾಜ್ಯ ಸರ್ಕಾರವೂ ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪರವಾಗಿ ನಿಹಾಲ್ ಕೋಡ್ಲುಗುಳಿ, ಕವನ ಬೆಳ್ಳಿಯಪ್ಪ ಹಾಗೂ ಮೋಕ್ಷ ವೆಂಕಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಆತಂಕ ವ್ಯಕ್ತಪಡಿಸಿ ವರದಿಯನ್ನು ವಿರೋಧಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ವರದಿ ಜಾರಿಯಾದರೆ ಮಲೆನಾಡಿನ ಜನರ ಜೀವನಕ್ರಮದ ಮೇಲೆ ಹಲವು ನಿರ್ಬಂಧಗಳು ಎದುರಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಮ್ಮ ಧಾರ್ಮಿಕ ಕೇಂದ್ರಗಳು ಹಾಗೂ ಸಾಂಪ್ರದಾಯಿಕ ಆರಾಧನಾ ಪದ್ಧತಿಗಳ ಮೇಲೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಬಹುದು. ವರದಿಯಿಂದ ಉಂಟಾಗಬಹುದಾದ ವಿವಿಧ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಹೋರಾಟವನ್ನು ಮುಂದುವರಿಸಲಾಗುವುದು ಎಂದರು.ಪಿ.ಸಿ ಜಯರಾಮ್ ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದರು. ಪ್ರತಿಭಟನಾಕಾರರು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಜಾಥಾ ನಡೆಸಿ, ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ತೆರಳಿದರು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಹರೀಶ್ ಕಂಜಿಪಿಲಿ, ಪಿ.ಎಸ್. ಗಂಗಾಧರ್, ಸುರೇಶ್ ಅಮೈ, ವಿನಯಕುಮಾರ್ ಕಂದಡ್ಕ ಸೇರಿದಂತೆ ನೂರಾರು ಕೃಷಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕೃಷಿಕ ರವಿಕುಮಾರ್ ಭಟ್ ಉಬರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸಂಚಾಲಕ ಭುವನೇಂದ್ರ ದಾಸ್ ಸ್ವಾಗತಿಸಿದರು. ಸದಸ್ಯ ಅಶೋಕ್ ಪೀಚೆ ವಂದಿಸಿದರು. ದುಶ್ಯಂತ್ ಶ್ರೀರಡ್ಕ ಹಾಗೂ ವನಿತಾ ಮೀನಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ











