ಪೆರಾಜೆ ಸಮೀಪ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ದಂಪತಿ ಹಾಗೂ ಮಗು ಗಾಯಗೊಂಡ ಘಟನೆ ನ.1ರಂದು ವರದಿಯಾಗಿದೆ.ತಾಜುದ್ದೀನ್ ಅರಂತೋಡು ಅವರು ಪತ್ನಿ ಅಸ್ಮಾ ಹಾಗೂ ಮಗ ಅಪ್ನಾನ್ ಅವರೊಂದಿಗೆ ಸ್ಕೂಟಿಯಲ್ಲಿ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಪೆರಾಜೆ ಬಳಿ ಈ ಅಪಘಾತ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಕ್ರೇಟಾ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿದ್ದ ತಾಜುದ್ದೀನ್, ಅವರ ಪತ್ನಿ ಅಸ್ಮಾ ಹಾಗೂ ಮಗ ಅಪ್ನಾನ್ ತಾಜುದ್ದೀನ್ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕ ವಾಹನ ನಿಲ್ಲಿಸದೆ ಮುಂದಕ್ಕೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
















