ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಾಹಿತ್ಯ ಸಮ್ಮೇಳನವು ನವೆಂಬರ್ 29ರ ಭಾನುವಾರ ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.
ಅರೆಭಾಷೆಯ ಮೇಲಿನ ಪ್ರೀತಿ, ಅಭಿಮಾನವನ್ನು ಹೆಚ್ಚಿಸುವುದರೊಂದಿಗೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನ.29ರಂದು ಬೆಳಗ್ಗೆ 8.30ಕ್ಕೆ ಸಂಪಾಜೆ ಗೇಟ್ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ಕೃಷಿಕರಾದ ಇಂದಿರಾ ದೇವಿಪ್ರಸಾದ್ ಚಾಲನೆ ನೀಡಲಿದ್ದಾರೆ. ಸಾಹಿತಿ ಹಾಗೂ ಲೇಖಕಿ ಲೀಲಾ ದಾಮೋದರ ಕುಂದಲ್ಪಾಡಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದು, ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸೂರಜ್ ಹೊಸೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸ್ವಾಗತಿಸಿ ಪ್ರಸ್ತಾವನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದಿನ ಸಮ್ಮೇಳನಾಧ್ಯಕ್ಷ ಹಾಗೂ ಕವಿ ಭವಾನಿಶಂಕರ ಹೊದ್ದೆಟ್ಟಿ, ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಂತ್ ಎನ್.ಸಿ. ಊರುಬೈಲು, ಸೋಮಶೇಖರ ಕ್ಯೋಂಗಾಜೆ, ಸುಳ್ಯ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ., ಕೂಡಡ್ಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಸೋಮಣ್ಣ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಎನ್. ಭಾಗವಹಿಸಲಿದ್ದಾರೆ.
*ವಿಚಾರ ಸಂಕಿರಣ, ಕವಿಗೋಷ್ಠಿ*
ಮಧ್ಯಾಹ್ನ 12 ಗಂಟೆಯಿಂದ ವಿಚಾರ ಸಂಕಿರಣ ನಡೆಯಲಿದೆ. ‘ಕೃಷಿ ಬೊದ್ಕು ಮತ್ತು ಅದರ ಪ್ರಸ್ತುತ ಸವಾಲುಗಳು’ ವಿಷಯದ ಕುರಿತು ಕಲ್ಮಡ್ಕದ ಕೃಷಿಕ ಸುರೇಶ್‌ಚಂದ್ರ ಟಿ.ಆರ್. ಹಾಗೂ ‘ಭಾಷೆನ ಮುಂದೆನ ತಲೆಮಾರ್‌ಗೆ ದಾಟ್ಟುವ ಮಾರ್ಗ’ ವಿಷಯದ ಕುರಿತು ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಕರುಣಾಕರ ನಿಡಿಂಜಿ ಅವರ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಲಿದೆ. ಶಿವದೇವಿ ಅವನೀಶ್ಚಂದ್ರ, ರೇಷ್ಮಾ ಕುಕ್ಕನೂರು, ಸಹನಾ ಕಾಂತಬೈಲು, ಜಯಲಕ್ಷ್ಮೀ ಕಡೇರ, ಉದಯಕುಮಾರಿ ಚೆಂಬು, ಜೀವನ್ ಪುರ, ದೀಪಶ್ರೀ ಅಡಲೆ, ಮನೋಜ್ ಕುಡೆಕಲ್ಲು ಹಾಗೂ ಮುಕ್ಕಾಟಿ ಹರಿಣಿ ಗಿರೀಶ್ ಕವನ ವಾಚನ ಮಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ವಿಶ್ರಾಂತ ಪ್ರಾಂಶುಪಾಲ ಡಾ. ಯು.ಪಿ. ಶಿವಾನಂದ ಅಧ್ಯಕ್ಷತೆ ವಹಿಸಲಿದ್ದು, ಸುದ್ದಿ ಸಮೂಹ ಸಂಸ್ಥೆ ಸುಳ್ಯದ ಆಡಳಿತ ನಿರ್ದೇಶಕ, ಲೇಖಕ ಕುಯಿಂತೋಡು ದಾಮೋದರ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಚೆಂಬು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವಿಸ್ಮಯಿ, ಕೊಡಗು ಜಿಲ್ಲೆಯ ಲೇಖಕರು ಮತ್ತು ಕಲಾವಿದರ ಬಳಗದ ಮಾಜಿ ಅಧ್ಯಕ್ಷ ಲೋಕನಾಥ ಅಮೆಚೂರ್, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಹಾಗೂ ಕೂಡಡ್ಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನವೀನ್ ರಾಮಕಜೆ ಭಾಗವಹಿಸಲಿದ್ದಾರೆ. ಕೃಷಿ, ವೈದ್ಯಕೀಯ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಗುವುದು.
**ಸಂಜೆ ಅರೆಭಾಷೆ ಸಾಂಸ್ಕೃತಿಕ ಸಂಜೆ**
ಸಂಜೆ 5 ಗಂಟೆಯಿಂದ ಅರೆಭಾಷೆ ಸಾಂಸ್ಕೃತಿಕ ಸಂಜೆ ನಡೆಯಲಿದ್ದು, ಸ್ಥಳೀಯ ಸಂಘ-ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಶಿಕಾಂತ್ ಮಿತ್ತೂರು ಸುಳ್ಯ ಅವರ ತಂಡದಿಂದ ‘ಅರೆಭಾಷೆ ಸಿರಿ ಸಂಸ್ಕೃತಿ’ ನೃತ್ಯರೂಪಕ ಹಾಗೂ ರವಿಚಂದ್ರ ಪೆರುಮುಂಡ ಚೆಂಬು ಮತ್ತು ಬಳಗದವರಿಂದ ‘ಕಾನದ ಮಾಯೆ’ ಅರೆಭಾಷೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸಮ್ಮೇಳನದ ಅಂಗವಾಗಿ ಅರೆಭಾಷೆ ಕವನ ಸ್ಪರ್ಧೆ, ಗಾದೆ ಬರೆಯುವ ಸ್ಪರ್ಧೆ, ಮೂಲ ಪದಗಳನ್ನು ಬರೆಯುವ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಾಹನ ಮೆರವಣಿಗೆ, ಪುರಾತನ ವಸ್ತುಗಳ ಪ್ರದರ್ಶನ, ತಿಂಡಿ-ತಿನಿಸು, ಹೂವಿನ ಗಿಡಗಳು, ಚಿತ್ರಕಲೆ, ಪುಸ್ತಕ, ನೆಟ್ಟಿ ಬಿತ್ತನೆ, ಬಟ್ಟೆಬರೆ, ಆಟಿಕೆ ಹಾಗೂ ಆಭರಣ ಮಳಿಗೆಗಳು ವಿಶೇಷ ಆಕರ್ಷಣೆಯಾಗಲಿವೆ.
ಅರೆಭಾಷೆ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಚಂದ್ರಾವತಿ ಬಡ್ಡಡ್ಕ, ಜ್ಞಾನೇಶ್ ಹಾಗೂ ಲತಾಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.








































