ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು, ಅರಂತೋಡು ಇದರ 2026–27ನೇ ಸಾಲಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ತೊಡಿಕಾನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.7ರಂದು ಚಾಲನೆ ನೀಡಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ ಏಳು ದಿನಗಳ ಶಿಬಿರವನ್ನು ಅರಂತೋಡು–ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸಂಚಾಲಕ ಎ.ಸಿ. ವಸಂತ್ ವಹಿಸಿದ್ದರು. ಉದ್ಘಾಟಿಸಿ ಮಾತನಾಡಿದ ಸಂತೋಷ್, ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವುದರೊಂದಿಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ಪಡೆದ ಅನುಭವವನ್ನು ಭವಿಷ್ಯದ ಬದುಕಿನಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಎ.ಬಿ., ಶಾಲೆಯ ಮುಖ್ಯಗುರು ಚಂದ್ರಾವತಿ, ಪಾಪ್ಯುಲರ್ ಎಜುಕೇಶನ್‌ನ ಕೋಶಾಧಿಕಾರಿ ಅಬ್ದುಲ್ಲಾ, ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್., ಶಿಬಿರ ನಾಯಕರಾದ ಸುಕೇಶ್ ಮತ್ತು ದೀಪಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ. ಸ್ವಾಗತಿಸಿದರು. ಶಿಬಿರಾರ್ಥಿಗಳು ಪ್ರಾರ್ಥಿಸಿದರು. ಸಹಶಿಬಿರಾಧಿಕಾರಿ ಭಾಗ್ಯಶ್ರೀ ಎಚ್.ಬಿ. ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ನಿರೂಪಿಸಿದರು.
ಶಿಬಿರದ ಯಶಸ್ಸಿಗೆ ಸುರೇಶ್ ವಾಗ್ಲೆ, ಪದ್ಮಕುಮಾರ್, ಅಶ್ವಿನಿ ಕೆ.ಎಂ., ಶಾರಿಕ, ತಸ್ಲೀಮಾ ಹಾಗೂ ಸೌಮ್ಯಶ್ರೀ ಸೇರಿದಂತೆ ಸಿಬ್ಬಂದಿ ಸಹಕರಿಸಿದರು.
ಅ.7ರಿಂದ 13ರವರೆಗೆ ನಡೆಯುವ ಶಿಬಿರದಲ್ಲಿ ಶ್ರಮದಾನ, ಸ್ವಚ್ಛತಾ ಕಾರ್ಯ, ಶೈಕ್ಷಣಿಕ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತೊಡಿಕಾನದಲ್ಲಿ ಎನ್‌ಎಂ ಪಿಯು ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಆರಂಭ











