ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ 18ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಮಾನಸಿಕ ಸ್ವಾಸ್ಥ್ಯ ಮತ್ತು ಆರೋಗ್ಯ’ ವಿಷಯದ ಕುರಿತು ಅರಂತೋಡು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಮಾಹಿತಿ ನೀಡಿದರು.
ಸ್ವಸ್ಥ ಮನಸ್ಸು ಆರೋಗ್ಯಕರ ಬದುಕಿಗೆ ಕಾರಣವಾಗುತ್ತದೆ. ಬಾಲ್ಯದಿಂದಲೇ ಸಂಸ್ಕಾರಯುತ ಗುಣನಡತೆಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಉತ್ತಮ ಆಲೋಚನೆಗಳು, ಸಕಾರಾತ್ಮಕ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯು ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಟರ್ಯಾಕ್ಟ್ ಕ್ಲಬ್ ನಿರ್ದೇಶಕಿ ಅಶ್ವಿನಿ ಕೆ.ಎಂ., ಸಹಶಿಕ್ಷಕರಾದ ಬಲರಾಜ್ ಮತ್ತು ಸುನೀತ ಎ., ಅಂಗನವಾಡಿ ಕಾರ್ಯಕರ್ತೆಯಾದ ಹೇಮಾವತಿ ಹಾಗೂ ಶಾಲಾಭಿವೃದ್ಧಿ ಸದಸ್ಯರಾದ ಶ್ರೀದೇವಿ ಮತ್ತು ಸರೋಜ ಉಪಸ್ಥಿತರಿದ್ದರು.
ಭಾವನಾ ತಂಡದ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಸುಭಿಕ್ಷಾ ಸ್ವಾಗತಿಸಿದರು. ಪ್ರಜ್ವಲ್ ವಂದನಾರ್ಪಣೆ ಮಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ. ಹಾಗೂ ಸಹಾಯಕ ಕಾರ್ಯಕ್ರಮಾಧಿಕಾರಿಗಳಾದ ಮೋಹನ್ ಚಂದ್ರ, ಅಶ್ವಿನಿ ಕೆ.ಎಂ. ಮತ್ತು ಸೌಮ್ಯಶ್ರೀ ಉಪಸ್ಥಿತರಿದ್ದರು.











