ಸರಿಯಾದ ಬುದ್ಧಿ, ವಿವೇಕ ಮತ್ತು ತನ್ನತನವನ್ನು ಅರಿತಿರುವ ಒಬ್ಬ ಮನುಷ್ಯನನ್ನು ಯಾರಿಂದಲೂ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅಪರಂಜಿ ಚಿನ್ನವನ್ನು ಎಲ್ಲೇ ಇಟ್ಟರೂ, ಯಾವುದೇ ಪರಿಸ್ಥಿತಿಯಲ್ಲಿಟ್ಟರೂ ಅದು ತನ್ನ ಮೂಲ ಗುಣವನ್ನು ಕಳೆದುಕೊಳ್ಳುವುದಿಲ್ಲ. ಅದಕ್ಕಾಗಿಯೇ ಅದು ಅಪರಂಜಿ.
ಇದೇ ಮಾತು ಮನುಷ್ಯನ ಗುಣಕ್ಕೂ ಅನ್ವಯಿಸುತ್ತದೆ.
ನಿಜವಾದ ಒಳ್ಳೆಯತನ ಹೊಂದಿರುವವರು ಯಾವುದೇ ಪರಿಸ್ಥಿತಿ ಎದುರಾದರೂ ತಮ್ಮ ಮೂಲ ಗುಣವನ್ನು ಸುಲಭವಾಗಿ ಕಳೆದುಕೊಳ್ಳುವುದಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಜಾಣ್ಮೆ ಅವರಲ್ಲಿರುತ್ತದೆ. ಬದಲಾವಣೆ ಕಾಣಿಸಿಕೊಂಡರೂ ಅದು ಅವರ ಮೂಲ ಸ್ವಭಾವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದರ್ಥವಲ್ಲ.
ಆದರೆ ಕೆಲವರು,
“ನಾನು ಒಳ್ಳೆಯವನಾಗಿದ್ದೆ… ನನ್ನನ್ನು ಕೆಟ್ಟವನನ್ನಾಗಿ ಮಾಡಿದ್ದು ನೀವು”
ಎಂದು ಹೇಳುತ್ತಾರೆ.
ಇಲ್ಲಿಯೇ ಒಂದು ಪ್ರಶ್ನೆ ಮೂಡುತ್ತದೆ…
ನಿಜವಾಗಿಯೂ ಒಬ್ಬ ಒಳ್ಳೆಯ ಮನುಷ್ಯನನ್ನು ಮತ್ತೊಬ್ಬರು ಕೆಟ್ಟವನನ್ನಾಗಿ ಮಾಡಬಹುದೇ?
ಕಾಗೆ ಬಂಗಾರವನ್ನು ಎಷ್ಟೇ ಜೋಪಾನವಾಗಿ, ಪ್ರೀತಿಯಿಂದ ಮತ್ತು ಸುರಕ್ಷಿತವಾಗಿ ಇಟ್ಟರೂ, ಒಂದು ದಿನ ಅದರ ನಿಜವಾದ ಬಣ್ಣ ಹೊರಬರುತ್ತದೆ. ಅದು ತನ್ನ ಸ್ವಭಾವವನ್ನು ಶಾಶ್ವತವಾಗಿ ಬದಲಾಯಿಸಿಕೊಳ್ಳುವುದಿಲ್ಲ. ಸೂಕ್ತ ಸಂದರ್ಭ ಸಿಕ್ಕಾಗ ತನ್ನ ನಿಜಸ್ವರೂಪವನ್ನು ತೋರಿಸುತ್ತದೆ.
ಹಾಗಾದರೆ ಇದರಲ್ಲಿರುವ ನೀತಿ ಏನು?
ನಿಜವಾದ ಅಪರಂಜಿಯನ್ನು ಯಾರಿಂದಲೂ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ.
ಆದರೆ ನಾವು ಅಪರಂಜಿ ಎಂದುಕೊಂಡದ್ದು ಕಾಗೆ ಬಂಗಾರವಾಗಿದ್ದರೆ, ತಪ್ಪು ಅಪರಂಜಿಯದ್ದಲ್ಲ. ಅದನ್ನು ಗುರುತಿಸುವಲ್ಲಿ ಎಡವಿದ್ದು ನಮ್ಮದೇ.
ಕೆಲವೊಮ್ಮೆ ನಾವು ಒಬ್ಬ ವ್ಯಕ್ತಿಯ ಮಾತು, ನಡೆ, ಪ್ರೀತಿ ಅಥವಾ ವರ್ತನೆಯಿಂದ ಆತನನ್ನು ಒಳ್ಳೆಯವನು ಎಂದುಕೊಳ್ಳುತ್ತೇವೆ. ಆದರೆ ಕಾಲ ಕಳೆದಂತೆ, ಪರಿಸ್ಥಿತಿಗಳು ಬದಲಾಗುತ್ತಾ ಹೋದಂತೆ ಆ ವ್ಯಕ್ತಿಯ ನಿಜವಾದ ಸ್ವಭಾವ ನಿಧಾನವಾಗಿ ಹೊರಬರುತ್ತದೆ. ಆಗ “ಅವನು ಬದಲಾಗಿಬಿಟ್ಟ” ಎಂದುಕೊಳ್ಳುತ್ತೇವೆ.
ಆದರೆ ಎಲ್ಲ ಬದಲಾವಣೆಯೂ ನಿಜವಾದ ಬದಲಾವಣೆಯಾಗಿರಬೇಕೆಂದಿಲ್ಲ.
ಕೆಲವೊಮ್ಮೆ ಪರಿಸ್ಥಿತಿ ವ್ಯಕ್ತಿಯನ್ನು ಬದಲಾಯಿಸುವುದಿಲ್ಲ; ವ್ಯಕ್ತಿಯ ನಿಜಸ್ವರೂಪವನ್ನು ಹೊರತರುತ್ತದೆ.
ಒಳ್ಳೆಯವರು ಯಾವತ್ತಿದ್ದರೂ ಒಳ್ಳೆಯವರೇ. ಪರಿಸ್ಥಿತಿ ಅವರನ್ನು ಪರೀಕ್ಷಿಸಬಹುದು, ನೋಯಿಸಬಹುದು, ಕಷ್ಟಕ್ಕೆ ಸಿಲುಕಿಸಬಹುದು. ಆದರೆ ಅವರೊಳಗಿನ ಮಾನವೀಯತೆ, ಮೌಲ್ಯಗಳು ಮತ್ತು ಒಳ್ಳೆಯತನವನ್ನು ಸಂಪೂರ್ಣವಾಗಿ ಬದಲಾಯಿಸುವುದು ಅಷ್ಟು ಸುಲಭವಲ್ಲ.
ಆದ್ದರಿಂದ, ಒಬ್ಬ ವ್ಯಕ್ತಿ ಬದಲಾಗಿದ್ದಾನೆ ಎಂದು ಕಂಡಾಗಲೆಲ್ಲಾ ಅದಕ್ಕೆ ಬೇರೆಯವರನ್ನೇ ಕಾರಣವೆಂದು ಹೇಳಬೇಡಿ.
“ನನ್ನನ್ನು ಕೆಟ್ಟವನನ್ನಾಗಿ ಮಾಡಿದ್ದು ನೀವು” ಎಂಬ ಮಾತಿನ ಹಿಂದೆ ಕೆಲವೊಮ್ಮೆ ನೋವು ಇರಬಹುದು; ಆದರೆ ಕೆಲವೊಮ್ಮೆ ಅದು ತನ್ನ ನಿಜಸ್ವರೂಪಕ್ಕೆ ನೀಡುವ ಸಮರ್ಥನೆಯೂ ಆಗಿರಬಹುದು.
ಹೀಗಾಗಿ, ವ್ಯಕ್ತಿಗಳನ್ನು ಗುರುತಿಸುವಾಗ ಮಾತಿಗಿಂತ ಕಾಲವನ್ನು ನಂಬಿ. ವರ್ತನೆಗಿಂತ ಸ್ಥಿರತೆಯನ್ನು ಗಮನಿಸಿ. ಪರಿಸ್ಥಿತಿ ಬದಲಾದಾಗ ಅವರ ಗುಣ ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಿ.
ಏಕೆಂದರೆ…
ಅಪರಂಜಿ ಚಿನ್ನಕ್ಕೆ ಪರೀಕ್ಷೆಯ ಅಗತ್ಯವಿಲ್ಲ; ಅದು ಎಲ್ಲಿದ್ದರೂ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ.
ಅದೇ ರೀತಿ, ನಿಜವಾದ ಒಳ್ಳೆಯತನ ಹೊಂದಿರುವ ಮನುಷ್ಯನನ್ನು ಕಾಲವೂ ಪರಿಸ್ಥಿತಿಯೂ ಪರೀಕ್ಷಿಸಬಹುದು; ಆದರೆ ಅವನ ಮೂಲ ಗುಣವನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ.
ಅಪರಂಜಿ ಚಿನ್ನ ಅಂದುಕೊಂಡದ್ದು ,ಕಾಗೆ ಬಂಗಾರವೇ…?











