ಸುಳ್ಯ: ಪಟ್ಟಣದ ರಥಬೀದಿಯಲ್ಲಿರುವ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರದ ಸಮೀಪದ ಬಸ್ ನಿಲ್ದಾಣವು ಕುಡುಕರ ವಿಶ್ರಾಂತಿ ತಾಣವಾಗಿ ಪರಿವರ್ತನೆಯಾಗುತ್ತಿದೆ.
ಇಲ್ಲಿ ಬಸ್ ನಿಲ್ದಾಣ ಇದ್ದರೂ ಬಸ್‌ಗಳನ್ನು ನಿಲ್ಲಿಸದೆ, ಸುಮಾರು 100 ಮೀಟರ್ ಕೆಳಭಾಗದಲ್ಲಿ ಬಸ್ ಗಳನ್ನು ನಿಲ್ಲಿಸಲಾಗುತ್ತಿದೆ.
ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದೆ ಕೆಳಭಾಗದಲ್ಲಿ ನಿಲ್ಲಿಸುವುದರಿಂದ, ವಿಶೇಷವಾಗಿ ಶಾಲಾ-ಕಾಲೇಜುಗಳು ಬಿಡುವ ಹಾಗೂ ಆರಂಭವಾಗುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಚರಿಸುವ ಸಂದರ್ಭ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್‌ಗಳಿಗಾಗಿ ಪ್ರಯಾಣಿಕರು ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರಿಗೂ ಸಂಚಾರದಟ್ಟಣೆ ಉಂಟಾಗುತ್ತಿದೆ.
ಇದರ ಜೊತೆಗೆ, ಬಸ್ ನಿಲ್ದಾಣದ ಪರಿಸರದಲ್ಲಿ ಕೆಲವರು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುವುದು ಹಾಗೂ ಕುಡುಕರ ತಾಣವಾಗಿ ಮಾರ್ಪಡುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ ಮುಜುಗರ ಹಾಗೂ ಅಸುರಕ್ಷಿತ ಭಾವನೆ ಉಂಟಾಗುತ್ತಿದೆ ಎನ್ನಲಾಗಿದೆ.
ಬಸ್ ನಿಲ್ದಾಣವನ್ನು ನಿರ್ಮಿಸಿರುವ ಉದ್ದೇಶವೇ ಪ್ರಯಾಣಿಕರಿಗೆ ಸುರಕ್ಷಿತವಾಗಿ ಬಸ್ ಹತ್ತಲು-ಇಳಿಯಲು ಅವಕಾಶ ಕಲ್ಪಿಸುವುದಾಗಿದೆ. ಆದರೆ ಬಸ್‌ಗಳು ನಿಲ್ದಾಣದ ಬದಲಾಗಿ ಕೆಳಭಾಗದಲ್ಲಿ ನಿಲ್ಲುತ್ತಿರುವುದರಿಂದ ನಿಲ್ದಾಣದ ಬಳಕೆಯೇ ಪ್ರಶ್ನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಾರಿಗೆ ಇಲಾಖೆ, ನಗರಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಬಸ್‌ಗಳು ನಿಗದಿತ ನಿಲ್ದಾಣದಲ್ಲೇ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣದ ಸುತ್ತಮುತ್ತ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಕಲ್ಪಿಸಿ, ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕೆಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಸುಳ್ಯ : ಬಸ್ ನಿಲ್ದಾಣವಿದ್ದರೂ ಬಸ್ ನಿಲ್ದಾಣದಲ್ಲಿ ನಿಲ್ಲದ ಬಸ್‌ಗಳು; ಕುಡುಕರ ಅಡ್ಡೆಯಾಗುತ್ತಿರುವ ರಥಬೀದಿ ಬಸ್ ನಿಲ್ದಾಣ











