ಸುಳ್ಯ : ಪುಟ್‌ಪಾತ್‌ ತೆರೆದು ಕಾಮಗಾರಿ, ಚರಂಡಿಗೆ ಬಿದ್ದ ಮಗು!

ಸುಳ್ಯ: ನಗರದ ಶ್ರೀರಾಮಪೇಟೆಯ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್‌ ಕಾಮಗಾರಿ ನಡೆಯುತ್ತಿರುವ ವೇಳೆ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಮಗು ಚರಂಡಿಗೆ ಬಿದ್ದ ಘಟನೆ ನಡೆದಿದೆ.
ಜೆಸಿಬಿ ಮೂಲಕ ರಸ್ತೆ ಬದಿಯನ್ನು ಅಗೆದು ಕಾಮಗಾರಿ ನಡೆಸಲಾಗುತ್ತಿದ್ದು, ಈ ವೇಳೆ ಫುಟ್‌ಪಾತ್‌ನ ಚರಂಡಿ ಫ್ಲ್ಯಾಬ್‌ಗಳನ್ನು ತೆರವುಗೊಳಿಸಲಾಗಿತ್ತು. ಯಾವುದೇ ಮುನ್ನೆಚ್ಚರಿಕಾ ತಡೆಗೋಡೆ ಅಥವಾ ಸೂಕ್ತ ಎಚ್ಚರಿಕೆ ವ್ಯವಸ್ಥೆ ಇಲ್ಲದಿರುವ ಸಂದರ್ಭದಲ್ಲಿ, ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಮಗು ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ಗಮನಿಸುತ್ತಾ ಮುಂದೆ ಸಾಗಿತ್ತು.
ಈ ವೇಳೆ ಫುಟ್‌ಪಾತ್‌ನಲ್ಲಿ ತೆರೆಯಲಾಗಿದ್ದ ಚರಂಡಿ ಕಾಣದೆ ಮಗು ಏಕಾಏಕಿ ಒಳಗೆ ಬಿದ್ದಿದೆ. ಘಟನೆ ಕಂಡ ಸ್ಥಳೀಯರು ಕೂಡಲೇ ಧಾವಿಸಿ ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್‌ ಮಗುವಿಗೆ ಯಾವುದೇ ಗಂಭೀರ ಗಾಯವಾಗದೆ ಅಪಾಯದಿಂದ ಪಾರಾಗಿದೆ.
ನಗರದ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರವಿರುವ ಸ್ಥಳದಲ್ಲೇ ಚರಂಡಿ ತೆರೆದು ಕಾಮಗಾರಿ ನಡೆಸಲಾಗುತ್ತಿದ್ದರೂ, ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ರಾತ್ರಿ ವೇಳೆ ಸಂಚರಿಸುವವರಿಗೆ ಇಂತಹ ತೆರೆದ ಚರಂಡಿಗಳು ಅಪಾಯಕಾರಿಯಾಗಿದ್ದು, ಸಂಬಂಧಪಟ್ಟವರು ಕೂಡಲೇ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.















Leave a Comment

Your email address will not be published. Required fields are marked *

error: Content is protected !!
Scroll to Top