ಸುಳ್ಯ: ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರಲ್ಲಿ ಪರಿಸರ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ, ಮಾತೃಭಾಷೆ, ಸಂಸ್ಕೃತಿ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ‘ಸಂಕಲ್ಪ ಮಕ್ಕಳ ಹಬ್ಬ–2026’ ಅ.9ರಿಂದ 11ರವರೆಗೆ ಸುಳ್ಯದ ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.
ರಂಗಮಯೂರಿ ಕಲಾ ಶಾಲೆ (ರಿ.) ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಲವು ವಿಶೇಷ ಪ್ರದರ್ಶನಗಳು ನಡೆಯಲಿವೆ.
ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ
ಅ.9ರಂದು ಬೆಳಿಗ್ಗೆ 10.30ಕ್ಕೆ ಮಕ್ಕಳ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅಧ್ಯಕ್ಷತೆ ವಹಿಸಲಿದ್ದು, ‘ಗ್ರೀನ್ ಹೀರೋ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಉದ್ಘಾಟಿಸಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಕಮಿಟಿ ‘ಬಿ’ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ., ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಾಫ ಕೆ.ಎಂ., ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಗಳೂರು ಸಹಾಯಕ ನಿರ್ದೇಶಕ ರಾಜೇಶ್ ಜಿ., ಸುಳ್ಯ ತಹಶೀಲ್ದಾರ್ ಮಂಜುಳ ಎಂ., ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಂತ ಬ್ರಿಜಿಡ್ ಚರ್ಚ್ ಸುಳ್ಯದ ಧರ್ಮಗುರು ಫಾ. ಒಲ್ವಿನ್ ಡಿ. ಕುನ್ಹ, ಮೈಸೂರಿನ ಧ್ವನಿ ಫೌಂಡೇಶನ್ ಅಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ, ಉದ್ಯಮಿ ಹಾಗೂ ಪೋಷಕ ಕೃಷ್ಣ ಕಾಮತ್ ಮತ್ತು ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ ಅಧ್ಯಕ್ಷ ನಾರಾಯಣ ಕೇಕಡ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಚಾರಗಳ ಮೂಲಕ ಮಕ್ಕಳ–ಪೋಷಕರಿಗೆ ಮಾರ್ಗದರ್ಶನ
ಮಕ್ಕಳು ಹಾಗೂ ಪೋಷಕರಿಗೆ ಉಪಯುಕ್ತವಾಗುವ ಹಲವು ವಿಚಾರಗೋಷ್ಠಿಗಳು ಮೂರು ದಿನಗಳ ಕಾರ್ಯಕ್ರಮದ ಪ್ರಮುಖ ಭಾಗವಾಗಿವೆ.
ಅ.9ರಂದು ಪರಿಸರ ಜಾಗೃತಿ ಮತ್ತು ನಿರ್ವಹಣೆ, ಮಕ್ಕಳ ಸಾಮಾಜಿಕ ಜವಾಬ್ದಾರಿ ಹಾಗೂ ಮಾಧ್ಯಮಗಳ ಬಳಕೆ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಪರಿಸರ ತಜ್ಞ ಭಜನ್ ಬೋಪಣ್ಣ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕುಕ್ಕುಜಡ್ಕ ವಿಚಾರ ಮಂಡಿಸಲಿದ್ದಾರೆ.
ಅದೇ ದಿನ ಸಂಜೆ ಪೋಷಕರಿಗಾಗಿ ‘ಮಾತೃ ಸಂಗಮ ಮಾಲಿಕೆ’ಯಡಿ ‘ವ್ಯಸ್ತ ಜೀವನ–ಸ್ವಸ್ಥ ಭೋಜನ’ ವಿಷಯದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು ಇದನ್ನು ಪ್ರಸ್ತುತಪಡಿಸಲಿದೆ.
ಅ.10ರಂದು ಸರಕಾರಿ ಆಡಳಿತ ಹುದ್ದೆಗಳ ಮಾಹಿತಿ, ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಮತ್ತು ಮನೆಯ ವಾತಾವರಣ, ಮಕ್ಕಳ ಹಕ್ಕುಗಳು ಹಾಗೂ ಕಾನೂನು ಅರಿವು ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ವಿಚಾರ ಮಂಡನೆ ನಡೆಯಲಿದೆ.
ಪೋಷಕರಿಗಾಗಿ ‘ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ವಿಚಾರಗೋಷ್ಠಿಯೂ ನಡೆಯಲಿದೆ. ಸಂಜೆ ವಿದ್ಯಾರ್ಥಿಗಳಿಗಾಗಿ ‘ಎ.ಐ. ತಂತ್ರಜ್ಞಾನ… ಸಮಾಜ ಮತ್ತು ಸಂಸ್ಕೃತಿಗೆ ಪೂರಕವೇ? ಅಥವಾ ಮಾರಕವೇ?’ ಎಂಬ ವಿಷಯದ ಮೇಲೆ ಚರ್ಚಾಗೋಷ್ಠಿ ಆಯೋಜಿಸಲಾಗಿದೆ.
ಅ.11ರಂದು ಅರೆಭಾಷೆ ಕಲಿಕೆ ಮತ್ತು ಮಹತ್ವ, ಸಾಮಾಜಿಕ ಕಾಳಜಿ ಮತ್ತು ಸಾಂಸ್ಕೃತಿಕ ಶಿಕ್ಷಣ, ತುಳು ಭಾಷಾ ಕಲಿಕೆ ಮತ್ತು ಮಹತ್ವ ಹಾಗೂ ಮಕ್ಕಳ ಕೈಬರಹ ಮತ್ತು ವ್ಯಕ್ತಿತ್ವ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಲಿವೆ.
ಹಾಡು–ನೃತ್ಯದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ
ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳಿಗೂ ವಿಶೇಷ ಸ್ಥಾನ ನೀಡಲಾಗಿದೆ.
ಅ.9ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗುಂಪು ಗಾಯನ ಸ್ಪರ್ಧೆ ಹಾಗೂ ಅರೆಭಾಷೆ ಹಾಡಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಅ.10ರಂದು ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪು ನೃತ್ಯ ಮತ್ತು ತುಳು ಹಾಡಿಗೆ ಗುಂಪು ನೃತ್ಯ ಸ್ಪರ್ಧೆಗಳು ನಡೆಯಲಿವೆ. ಅ.11ರಂದು ಪದವಿಪೂರ್ವ ವಿದ್ಯಾರ್ಥಿಗಳ ಗುಂಪು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ ಸಾಂಸ್ಕೃತಿಕ ರಂಗು
ಮೂರು ದಿನಗಳ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ರಂಗಮಯೂರಿ ಕಲಾಶಾಲೆ, ಗಾನ ನೃತ್ಯ ಅಕಾಡೆಮಿ, ಡಿ ಯುನೈಟೆಡ್ ಡಾನ್ಸ್ ಸ್ಟುಡಿಯೋ, XTASY ಡ್ಯಾನ್ಸ್ ಕ್ರೀವ್, ಮಂಜು ಬ್ರದರ್ಸ್, ನಟರಾಜ ನೃತ್ಯನಿಕೇತನ, ಪ್ಯೂಷನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ನೀಡಲಿವೆ.
ಅ.11ರಂದು ಅಪರಾಹ್ನ 3.45ರಿಂದ ಕು. ಸುಪ್ರಜಾ ರಾವ್ ಪುತ್ತೂರು ಮತ್ತು ತಂಡದವರಿಂದ ವಯೋಲಿನ್ ವಾದನ ನಡೆಯಲಿದೆ.
ಆರೋಗ್ಯದಿಂದ ಎ.ಐ.ವರೆಗೆ ಹಲವು ವಿಶೇಷ ಆಕರ್ಷಣೆ
ಮಕ್ಕಳ ಹಬ್ಬದ ಮತ್ತೊಂದು ವಿಶೇಷವೆಂದರೆ ವಿವಿಧ ಕ್ಷೇತ್ರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಪ್ರಯತ್ನ.
ಆರೋಗ್ಯಕರ ಆಹಾರ ಮೇಳ, ಸ್ಥಳದಲ್ಲೇ ಮಾವು–ಹಲಸು–ಅನನಾಸು ಹಣ್ಣಿನ ಹೋಳಿಗೆ ತಯಾರಿ, ಪಾರಂಪರಿಕ ವಸ್ತುಗಳ ಪ್ರಾತ್ಯಕ್ಷಿಕೆ, ಹಳೆ ನಾಣ್ಯಗಳ ಪ್ರದರ್ಶನ, ತುಳು ಮತ್ತು ಅರೆಭಾಷೆ ಸಾಹಿತ್ಯ ಸ್ಪರ್ಧೆಗಳು, ಆಧುನಿಕ ತಾರಾಲಯ, ವರ್ಚುವಲ್ ರಿಯಾಲಿಟಿ ಗೇಮ್ಸ್, ಎ.ಐ. ರೋಬೋಟ್ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಮಕ್ಕಳ ಗಮನ ಸೆಳೆಯಲಿವೆ.
ಇದರೊಂದಿಗೆ ಪರಿಸರ ಜಾಗೃತಿ ಮೂಡಿಸುವ ‘ಮನೆಗೊಂದು ಗಿಡ’, ಮಾತೃಭಾಷಾ ಪ್ರೇಮದ ಕಾರ್ಯಕ್ರಮ, ಆಧಾರ್ ನೋಂದಣಿ ಹಾಗೂ ಹಣಕಾಸು ಮಾಹಿತಿ, ಪುಸ್ತಕ ಮೇಳ ಮತ್ತು ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದೆ.
ಅ.11ರಂದು ಸಮಾರೋಪ
ಮೂರು ದಿನಗಳ ಮಕ್ಕಳ ಹಬ್ಬದ ಸಮಾರೋಪ ಸಮಾರಂಭ ಅ.11ರಂದು ಸಂಜೆ 4.30ಕ್ಕೆ ನಡೆಯಲಿದೆ. ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಎ.ಓ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಕ್ಕಳ ಪ್ರತಿಭೆ, ಸೃಜನಶೀಲತೆ, ಜ್ಞಾನ, ಭಾಷೆ, ಕಲೆ ಮತ್ತು ಸಂಸ್ಕೃತಿಗೆ ಒಂದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ‘ಸಂಕಲ್ಪ ಮಕ್ಕಳ ಹಬ್ಬ–2026’ ಸುಳ್ಯದಲ್ಲಿ ಗಮನ ಸೆಳೆಯುವ ಮಕ್ಕಳ ಉತ್ಸವವಾಗಿ ರೂಪುಗೊಳ್ಳುತ್ತಿದೆ.
ಮಕ್ಕಳ ಮನಸಿಗೆ ಮುದ, ಜ್ಞಾನಕ್ಕೆ ಹೊಸ ದಾರಿ,ಅ.9ರಿಂದ ಸುಳ್ಯದಲ್ಲಿ ‘ಸಂಕಲ್ಪ ಮಕ್ಕಳ ಹಬ್ಬ’











